ಅಕ್ಕಾಮಹಾದೇವಿಯ ವಚನಗಳು( Akka Mahadevi Vachanagalu in Kannada).
ಅಕ್ಕಾಮಹಾದೇವಿಯವರು ಒಬ್ಬ ವಚನಕಾರರು ಇವರ ಅಂಕಿತನಾಮ ಚೆನ್ನಮಲ್ಲಿಕಾರ್ಜುನ.

ಅಕ್ಕಾಮಹಾದೇವಿಯ ವಚನಗಳು( Akka Mahadevi Vachanagalu in Kannada)
ಅಂಗದೊಳಗೆ ಅಂಗವಾಗಿ, ಅಂಗವ ಲಿಂಗೈಕ್ಯವ ಮಾಡಿದೆ. ಮನದೊಳಗೆ ಮನವಾಗಿ, ಮನವ ಲಿಂಗೈಕ್ಯವ ಮಾಡಿದೆ, ಭಾವದೊಳಗೆ ಭಾವವಾಗಿ, ಭಾವವ ಲಿಂಗೈಕ್ಯವ ಮಾಡಿದೆ, ಅರಿವಿನೊಳಗೆ ಅರಿವಾಗಿ, ಅರಿವ ಲಿಂಗೈಕ್ಯವ ಮಾಡಿದೆ.
ಜ್ಞಾನದೊಳಗೆ ಜ್ಞಾನವಾಗಿ, ಜ್ಞಾನವ ಲಿಂಗೈಕ್ಯವ ಮಾಡಿದೆ.
ಕ್ರೀಗಳೆಲ್ಲವ ನಿಲಿಸಿ ಕ್ರಿಯಾತೀತವಾಗಿ,
ನಿಃಪತಿ ಲಿಂಗೈಕ್ಯವ ಮಾಡಿದೆ,
ನಾನೆಂಬುದ ನಿಲಿಸಿ, ನೀನೆಂಬುದ ಕೆಡಿಸಿ, ಉಭಯವ ಲಿಂಗೈಕ್ಯವ ಮಾಡಿದೆ,
ಚೆನ್ನಮಲ್ಲಿಕಾರ್ಜುನಯ್ಯನೊಳಗೆ ನಾನಳಿದೆನಾಗಿ,
ಲಿಂಗವೆಂಬ ಘನವು ಎನ್ನಲ್ಲಿ
ಅಳಿಯಿತ್ತು ಕಾಣಾ ಸಂಗನಬಸವಣ್ಣಾ.

ಅಂಗ ಕ್ರಿಯಾಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು,
ಮನ ಅರಿವ ಬೆರಸಿ, ಜಂಗಮ ಸೇವೆಯ ಮಾಡಿ, ಮನ ಜಂಗಮಲಿಂಗದೊಳಗಾಯಿತ್ತು,
ಭಾವ ಗುರುಲಿಂಗದೊಳಗೆ ಬೆರಸಿ, ಮಹಾಪ್ರಸಾದವ ಭೋಗಿಸಿ,
ಭಾವ ಗುರುಲಿಂಗದೊಳಗಾಯಿತ್ತು,
ಚೆನ್ನಮಲ್ಲಿಕಾರ್ಜುನ, ನಿಮ್ಮ ಒಲುಮೆಯಿಂದ ಸಂದಳಿದು
ಸ್ವಯಲಿಂಗಿಯಾದೆನಯ್ಯಾ ಪ್ರಭುವೆ.

ಅಂಗ, ಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು,
ಮನ, ಲಿಂಗವ ವೇಧಿಸಿ, ಮನ ಲಿಂಗದೊಳಗಾಯಿತ್ತು,
ಭಾವ, ಲಿಂಗವ ವೇಧಿಸಿ, ಭಾವ ಲಿಂಗದೊಳಗಾಯಿತ್ತು ಚೆನ್ನಮಲ್ಲಿಕಾರ್ಜುನಾ, ನಿಮ್ಮ ಒಲುಮೆಯ ಸಂಗದಲ್ಲಿರ್ದು ಸ್ವಯಲಿಂಗವಾಯಿತ್ತು.

ಅಂಗದಲ್ಲಿ ಆಚಾರವ ತೋರಿದ; ಆ ಆಚಾರವೇ ಲಿಂಗವೆಂದರುಹಿದ, ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ; ಆ ಅರಿವೆ ಜಂಗಮವೆಂದು ತೋರಿದ, ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು ಎನಗೀ ಕ್ರಮವನರುಹಿದನಯ್ಯ ಪ್ರಭುವೆ.

ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ, ಮನದ ಭಂಗವ ಅರುಹಿನ ಮುಖದಿಂದ ಗೆಲಿದೆ,
ಜೀವದ ಭಂಗವ ಶಿವಾನುಭಾವದಿಂದ ಗೆಲಿದೆ, ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ,
ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಂಗೆ ತೋರುವ ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯಾ !
ಚೆನ್ನಮಲ್ಲಿಕಾರ್ಜುನ,
ಕಾಮನಕೊಂದು ಮನಸಿಜನಾಗುಳುಹಿದಡೆ ಮನಸಿಜನ ತಲೆಯ ಬರಹವ ತೊಡೆದನು.

ಅಂಗೈಯೊಳಗಣ ಲಿಂಗವ ಪೂಜಿಸುತ್ತ,
ಮಂಗಳಾರತಿಗಳನು ತೊಳಗಿ ಬೆಳಗುತ್ತಲಿರ್ದೆ ನೋಡಯ್ಯಾ, ಕಂಗಳ ನೋಟ, ಕರುವಿಟ್ಟ ಭಾವ, ಹಿಂಗದ ಮೋಹ
ತೆರಹಿಲ್ಲದಿರ್ದ ನೋಡಯ್ಯಾ,
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮನಗಲದ ಪೂಜೆ ಅನುವಾಯಿತೆನಗೆ.

ಅಂದೂ ನೀನೆ, ಇಂದೂ ನಿನ, ಎಂದೂ ನೀನೆ, ಕೇಳಾ ತಂದ ನಿನ್ನ ಬೆಂಬಳಿವಿಡಿದ ಹಳೆಮಗಳಾನಯ್ಯ
ಅಂದೂ ಇಂದೂ ಎಂದೂ ನಿನ್ನ ನಂಬಿದ ಒಲವಿನ ಶಿಶು ನಾನಯ್ಯ,
ಒಂದಲ್ಲದೆ ಎರಡರಿಯನಯ್ಯಾ,
ಎನ್ನ ತಂದೆ ಕೇಳಾ, ಚೆನ್ನಮಲ್ಲಿಕಾರ್ಜುನಾ ನಿಮ್ಮ ಎಂಜಲನ೦ಬ ಹಳೆಯವಳಾನಯ್ಯಾ.

ಅಕ್ಕ ಕೇಳಕ್ಕಾ, ನಾನೊಂದು ಕನಸ ಕಂಡೆ,
ಚಿಕ್ಕ ಚಿಕ್ಕ ಕೆಂಜೆಡೆಗಳ ಸುಲಿವಲ್ಲ ಗೊರವನು
ಬಂದೆನ್ನ ನೆರೆದ ನೋಡಪ್ಪಾ, ಆತನನಪ್ಪಿಕೊಂಡು ತಳವೆಳಗಾದನು
ಚೆನ್ನಮಲ್ಲಿ ಕಾರ್ಜುನನ ಕಂಡು ಕಣ್ಣ ಮುಚ್ಚಿ ತೆರೆದು ತಳವೆಳಗಾದನು.
ಅಕ್ಕಟಕ್ಕಟಾ, ಸಂಸಾರದ ಹಗರಣ ಬಂದಾಡಿತ್ತಲ್ಲಾ !
ಅಪ್ಪಾ ಚೀಪ್ಪಾ ಎಂಬ ಚೋಹವು ಅದು ಮೊಟ್ಟಮೊದಲಲ್ಲಿ ಬಂದಾಗಿತ್ತು.
ತುಪ್ಪುಳು ತೊಡೆದಂತೆ ಮೀಸೆಯ ಚೋಹವು
ಅದು ನಟ್ಟನಡುವೆ ಬಂದಾಯ್ತು,
ಮುಪ್ಪು ಮುಪ್ಪು ಎಂಬ ಚೋಹವು
ಅದು ಕಟ್ಟ ಕಡೆಯಲ್ಲಿ ಬಂದಾಗಿತ್ತು.
ನಿಮ್ಮ ನೋಟವು ತಿರಲೊಡನೆ
ಜಗದಾಟವು ತೀರಿತ್ತು ಕಾಣಾ ಚೆನ್ನಮಲ್ಲಿಕಾರ್ಜುನ.
ಅರಲುಗೊಂಡ ಕೆರೆಗೆ ತೊರೆಬಂದು ಹಾಯ್ದಂತಾಯಿತ್ತು
ಬರಲುಗೊಂಡ ಸಸಿಗೆ ಮಳೆ ಸುರಿದಂತಾಯಿತ್ತು ನೋಡಾ ಇಂದೆನಗೆ ಇಹದ ಸುಖ ಪರದ ಗತಿ ನಡೆದು ಬಂದಂತಾಯಿತ್ತು ನೋಡಾ ಎನಗೆ ಚೆನ್ನಮಲ್ಲಿಕಾರ್ಜುನಯ್ಯಾ,
ಗುರುಪಾದವ ಕಂಡು ಧನ್ಯಳಾದೆ ನೋಡಾ.
ಅಕ್ಕಿಯಿಲ್ಲದ ತುಷಕ್ಕೆ ಅಗ್ಗವಣಿಯನೆರೆದರ
ಅದೆಂದಿಂಗೆ ಬೆಳೆದು ಫಲವಪ್ಪುದಯ್ಯ ?
ಅರಿವಿಲ್ಲದವರಿಗೆ ಆಚಾರವಿದ್ದರೆ ಅರಕೆಗೆಟ್ಟು ಸುಖವೆಂದಪ್ಪುದಯ್ಯಾ
ಹೊರೆದ ಪರಿಮಳ ಸ್ಥಿರವಾಗಬಲ್ಲುದೆ?
ಎನ್ನದೇವ ಚೆನ್ನಮಲ್ಲಿಕಾರ್ಜುನವರಿಯದವರಿಗೆ
ಆಚಾರವಿಲ್ಲ ಕಾಣಿರಣ್ಣಾ.
ಅಗ್ನಿ ಸರ್ವವ್ಯಾಪಕವಾಗಿರುವಂತೆ,
ಚಿದ್ವಹಿರೂಪನಾದ ಶಿವನು ಸರ್ವವ್ಯಾಪಕನಾಗಿರ್ಪನು
ಹೃದಯಕಮಲವು ಮುಕುರದೋಪಾದಿಯಲ್ಲಿ ಪ್ರಕಾಶಿಸುತಿರ್ದಪದು
ಆ ಕನ್ನಡಿಯೋವಾದಿಯ ಹೃದಯಕಮಲದಲ್ಲಿ
ವ್ಯಾಪಕನಾದ ಶಿವನು
ಆತ್ಮನೆನಿಸಿಕೊಂಡು ಪ್ರತಿಬಿಂಬಿಸುತಿರ್ದವನು
ವೇದೋಪನಿಷದ್ಗಾಯತ್ರಿ ಪ್ರಸಿದ್ಧವಾದೀ ರಹಸ್ಯವ
ಗುರೂಪದೇಶದಿಂ ತಿಳಿವುದಯ್ಯ
ಶ್ರೀ ಚೆನ್ನಮಲ್ಲಿಕಾರ್ಜುನದೇವಾ,
ಅಪಾರ ಘನಗಂಭೀರದ ಅಂಬುಧಿಯಲ್ಲಿ ತಾರಾಪಥವಂ ನೋಡಿ ನಡೆಯೆ, ಭೈತ್ರದಿಂದ ದ್ವೀಪ ದ್ವೀಪಾಂತರಕ್ಕೆ ಸಕಲ ಪದಾರ್ಥವನೆಯ್ದಿಸುವುದು, ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನ ಸಮೀಪ ತೂರ್ಯಸಂಭಾಷಣೆಯನರಿದಡೆ ಮುನ್ನಿನಲ್ಲಿಗೆಯ್ದಿಸುವುದು
ಅಮೃತವನುಂಬ ಶಿಶುವಿಂಗೆ ವಿಷವನೂಡುವರೆ ಅಯ್ಯಾ? ನೆಳಲ ತಂಪಿನಲ್ಲಿ ಬೆಳೆದ ಸಸಿಗೆ ಉರಿಯ ಬೇಲಿಯ ಕಟ್ಟುವರೆ ಅಯ್ಯಾ? ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಕರುಣದ ಕಂದನೊಡನೆ ಸೂನೆಗಾರರ ಮಾತನಾಡಿಸುವರೆ ಅಯ್ಯಾ ?
ಅಮೇಧ್ಯದ ಮಡಿಕೆ, ಮೂತ್ರದ ಕುಡಿಕೆ, ಎಲುವಿನ ತಡಿಕೆ, ಕೀವಿನ ಹಡಿಕೆ ಸುಡಲೀ
ದೇಹವ; ಒಡಲುವಿಡಿದು ಕೆಡದಿರು, ಚೆನ್ನಮಲ್ಲಿಕಾರ್ಜುನನನರಿಯದ ಮರುಳೆ,
ಅಯ್ಯಾ, ಕತ್ತಲೆಯ ಕಳೆದುಳಿದ ಸತ್ಯಶರಣರ ಪರಿಯನೇನೆಂಬೆನಯ್ಯಾ ? ಘನವನೊಳಕೊಂಡ ಮನದ ಮಹಾನುಭಾವಿಗಳ ಬಳಿವಿಡಿದು ಬದುಕುವೆನಯ್ಯಾ ಅಯ್ಯಾ, ನಿನ್ನಲ್ಲಿ ನಿಂದು ಬೇರೊಂದರಿಯದ ಲಿಂಗಸುಖಿಗಳ ಸಂಗದಲ್ಲಿ ದಿನವ ಕಳೆಯಿಸಯ್ಯಾ ಚೆನ್ನಮಲ್ಲಿಕಾರ್ಜುನಾ.
ಅರಿದೆನೆಂದಡೆ ಅರಿಯಬಾರದು ನೋಡಾ
ಘನಕ್ಕೆ ಘನ ತಾನೆ ನೋಡಾ
ಚೆನ್ನಮಲ್ಲಿಕಾರ್ಜುನನ ನಿರ್ಣಯವಿಲ್ಲದೆ ಸೋತೆನು.
ಅಯ್ಯಾ, ತನ್ನ ತಾನರಿಯಬೇಕಲ್ಲದೆ, ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರಲ್ಲಿ ಕೇಳಲುಂಟೆ ?
ಚೆನ್ನಮಲ್ಲಿಕಾರ್ಜುನಾ, ನೀನರಿವಾಗಿ ಎನಗೆ ಮುಂದುದೋರಿದ ಕಾರಣ ನಿಮ್ಮಿಂದ ನಿಮ್ಮನರಿವೆನು
ಅಯ್ಯಾ, ನಿನ್ನ ಮುಟ್ಟಿ ಮುಟ್ಟದೆನ್ನ ಮನ ನೋಡಾ, ಬಿಚ್ಚಿ ಬೀಸರವಾಯಿತ್ತೆನ್ನ ಮನ
ಹೊಳಲ ಸುಂಕಿಗನಂತೆ ಹೊದಕುಳಿಗೊಂಡಿತೆನ್ನ ಮನ ಎರಡೆಂಬುದ ಮರೆದು ಬರಡಾಗದೆನ್ನ ಮನ ನೀನು ಆನಪ್ಪ ಪರಿಯೆಂತು ಹೇಳಾ, ಚೆನ್ನಮಲ್ಲಿಕಾರ್ಜುನಾ||
ಅಕ್ಕ ಕೇಳಕ್ಕಾ, ನಾನೊಂದು ಕನಸ ಕಂಡೆ,
ಚಿಕ್ಕ ಚಿಕ್ಕ ಕೆಂಜೆಡೆಗಳ ಸುಲಿವಲ್ಲ ಗೊರವನು
ಬಂದೆನ್ನ ನೆರೆದ ನೋಡಪ್ಪಾ, ಆತನನಪ್ಪಿಕೊಂಡು ತಳವೆಳಗಾದನು
ಚೆನ್ನಮಲ್ಲಿ ಕಾರ್ಜುನನ ಕಂಡು ಕಣ್ಣ ಮುಚ್ಚಿ ತೆರೆದು ತಳವೆಳಗಾದನು
ಅರಸಿ ತೊಳಲಿದಡಿಲ್ಲ, ಹರಸಿ ಬಳಲಿದಡಿಲ್ಲ ಬಯಸಿ ಹೊಕ್ಕಡಿಲ್ಲ, ತಪಸ್ಸು ಮಾಡಿದಡಿಲ್ಲ ,
ಅದು ತಾನಹ ಕಾಲಕ್ಕಲ್ಲದೆ ಸಾಧ್ಯವಾಗದು ಶಿವನೊಲಿದಲ್ಲದೆ ಕೈಗೂಡದು
ಚೆನ್ನಮಲ್ಲಿಕಾರ್ಜುನನೆನಗೊಲಿದನಾಗಿ
ನಾನು ಸಂಗನಬಸವಣ್ಣನ ಶ್ರೀಪಾದವ ಕಂಡು ಬದುಕಿದೆನು.
ಅರಸಿ ಮೊರೆವೊಕ್ಕಡೆ ಕಾವ ಗುರುವೆ,
ಜಯ ಜಯ ಗುರುವೆ,
ಅರೂ ಅರಿಯದ ಬಯಲೊಳಗೆ ಬಯಲಾಗಿ ನಿಂದ ನಿಲವ
ಹಿಡಿದೆನ್ನ ಕರದಲ್ಲಿ ತೋರಿದ ಗುರುವೆ, ಚೆನ್ನಮಲ್ಲಿಕಾರ್ಜುನ ಗುರುವೆ.
ಜಯ ಜಯ ಗುರು.